ರಾಜಿ ಪಂಚಾಯಿತಿ

 	ಎರಡು ಪಕ್ಷಗಳ ಮಧ್ಯೆ ಉದ್ಭವಿಸುವ ಭಿನ್ನಾಭಿಪ್ರಾಯಗಳನ್ನು ಆ ಪಕ್ಷಗಳೇ ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಸಹಾಯಮಾಡುವ ಒಂದು ಕ್ರಮ (ಕನ್ಸಿಲಿಯೇಷನ್). ಕೈಗಾರಿಕಾ ಘಟಕಗಳಲ್ಲಿ ಆಡಳಿತಗಾರರ ಹಾಗೂ ಕಾರ್ಮಿಕರ ಮಧ್ಯೆ ನಾನಾವಿಷಯಗಳಿಗಾಗಿ ವೈಮನಸ್ಯವುಂಟಾಗಿ ಕೆಲಸ ಕಾರ್ಯಗಳಿಗೆ ಧಕ್ಕೆಯಾಗುವ ಸಂದರ್ಭದಲ್ಲಿ ಎರಡೂ ಕಡೆಯವರನ್ನೂ ಒಂದೆಡೆಸೇರಿಸಿ ಅವರುಗಳೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹಾಗೆ ಮಾಡುವುದನ್ನು ರಾಜಿ ಮಾಡಿಸುವುದು ಎಂದು ಕರೆಯಲಾಗುತ್ತದೆ.

	ರಾಜಿ ಪಂಚಾಯಿತಿ, ಸಂಬಂಧಿಸಿದ ಕಾರ್ಖಾನೆಯಲ್ಲಾಗಲೀ ಇಲ್ಲವೆ ರಾಜಿ ಪಂಚಾಯಿತಿದಾರನ ಕಚೇರಿಯಲ್ಲಾಗಲೀ ನಡೆಯಬಹುದು. ರಾಜಿ ಪಂಚಾಯಿತಿಯಲ್ಲಿ ಪಂಚಾಯಿತಿದಾರ ಮುಖ್ಯವಾಗಿ ಎರಡು ಪಕ್ಷಗಳನ್ನೂ ಕರೆಸಿ ಪರಸ್ಪರ ಒಪ್ಪಂದಕ್ಕೆ ಬರುವಂತೆ ಮಾಡುತ್ತಾನೆ. ಇಲ್ಲಿ ರಾಜಿ ಪಂಚಾಯಿತಿಗೂ ಮಧ್ಯಸ್ಥಿಕೆಗೂ (ಮೀಡಿಯೇಷನ್) ಇರುವ ವ್ಯತ್ಯಾಸವನ್ನು ಗುರುತಿಸಬಹುದು. ಎರಡರಲ್ಲಿಯೂ ಕಕ್ಷಿ ಪ್ರತಿಕಕ್ಷಿಗಳಲ್ಲಿ ಒಪ್ಪಂದ ಮಾಡಿಸಲು ಪ್ರಯತ್ನ ನಡೆಯುತ್ತದೆ. ಆದರೆ ರಾಜಿ ಪಂಚಾಯಿತಿಯಲ್ಲಿ ಪಂಚಾಯಿತಿದಾರ ಎರಡು ಪಕ್ಷಗಳನ್ನೂ ಒಂದುಗೂಡಿಸಿ ಅವರು ತಮ್ಮಲ್ಲಿಯೇ ಒಪ್ಪಂದ ಮಾಡಿಕೊಳ್ಳುವಂತೆ ಸಹಾಯ ಮಾಡುತ್ತಾನೆಯೇ ಹೊರತು ಒಪ್ಪಂದದ ಷರತ್ತುಗಳನ್ನು ಸೂಚಿಸುವುದಾಗಲಿ ಅಥವಾ ತನ್ನ ನಿರ್ಧಾರವನ್ನು ಅವರ ಮೇಲೆ ಹೇರುವುದಾಗಲಿ ಮಾಡುವುದಿಲ್ಲ. ಮಧ್ಯಸ್ಥಿಕೆಯಲ್ಲಿ ಪಂಚಾಯಿತಿದಾರ ಎರಡು ಪಕ್ಷದವರನ್ನೂ ಕರೆಸಿ ಒಪ್ಪಂದಕ್ಕೆ ಸಂಬಂಧಪಟ್ಟ ತಮ್ಮ ಸಲಹೆ ನೀಡಿ ಅವರನ್ನು ರಾಜಿ ಮಾಡಿಸುತ್ತಾನೆ. ಅಂದರೆ ಪಂಚಾಯಿತಿದಾರ ರಾಜಿ ಪಂಚಾಯಿತಿಯಲ್ಲಿ ಪರಿಣಾಮಕಾರಿ ಪಾತ್ರವಹಿಸುವುದಿಲ್ಲವಾದರೂ ಮಧ್ಯಸ್ಥಿಕೆಯಲ್ಲಿ ಪರಿಣಾಮಕಾರಿ ಪಾತ್ರ ನಿರ್ವಹಿಸುತ್ತಾನೆ. ಕೆಲವು ಸಂದರ್ಭಗಳಲ್ಲಿ ರಾಜಿ ಪಂಚಾಯಿತಿದಾರ ಸಹ ಪರಿಣಾಮಕಾರಿ ಪಾತ್ರ ವಹಿಸುವನು. ಉದಾಹರಣೆಗೆ, ಆಸ್ಟ್ರೇಲಿಯದಲ್ಲಿನ ರಾಜಿ ಪಂಚಾಯಿತಿದಾರ ತನ್ನ ಅಭಿಪ್ರಾಯವನ್ನು ಮಧ್ಯಸ್ಥಿಕೆದಾರನಂತೆ ಎರಡು ಪಕ್ಷಗಳ ಮುಂದಿಡುವುದಲ್ಲದೆ ಅನೇಕ ವೇಳೆ ತನ್ನ ತೀರ್ಮಾನವನ್ನು ಸಹ ಕೊಡುವುದುಂಟು. ಈ ತೀರ್ಮಾನವನ್ನು ಕಡ್ಡಾಯವಾಗಿ ಪಕ್ಷಗಳ ಮೇಲೆ ಹೇರುವುದುಂಟು. ಇಂಥ ರಾಜಿ ಪಂಚಾಯಿತಿಯನ್ನು ಕಡ್ಡಾಯ ರಾಜಿ ಪಂಚಾಯಿತಿ (ಕಂಪಲ್ಸರಿ ಕನ್ಸಿಲೆಯೇಷನ್) ಎಂದು ಕರೆಯಲಾಗುತ್ತದೆ.

	ಭಾರತ ಸರ್ಕಾರ ಭಾರತೀಯ ಉದ್ಯೋಗ ತಕರಾರು ಕಾಯಿದೆ 1929ರ ಪ್ರಕಾರ ರಾಜಿ ಪಂಚಾಯಿತಿ ಮಂಡಳಿಯನ್ನು ನೇಮಿಸಿತು. ಇದರಲ್ಲಿ ಒಬ್ಬ ಅಧ್ಯಕ್ಷ ಮತ್ತು ಎರಡೂ ಪಕ್ಷಗಳ ಪ್ರತಿನಿಧಿಗಳನ್ನೊಳಗೊಂಡ ಎರಡು ಅಥವಾ ನಾಲ್ಕು ಸದಸ್ಯರುಗಳಿದ್ದು ರಾಜಿ ಪಂಚಾಯಿತಿ ಕಾರ್ಯ ನಿರ್ವಹಿಸಬೇಕಾಗಿತ್ತು. ಎರಡನೆಯ ಮಹಾಯುದ್ಧದ ಅನಂತರ ಸರ್ಕಾರ ಔದ್ಯಮಿಕ ತಕರಾರು ಕಾಯಿದೆ 1947ರ ಮೂಲಕ ರಾಜಿ ಪಂಚಾಯಿತಿ ಮಂಡಳಿ ಜೊತೆಗೆ ರಾಜಿ ಪಂಚಾಯಿತಿ ಅಧಿಕಾರಿಗಳನ್ನು ನಿಯಮಿಸಿತು. ಮಂಡಳಿಯನ್ನು ಕ್ಲಿಷ್ಟವಾದ ಇಲ್ಲವೆ ಅತಿ ಮುಖ್ಯವಾದ ಸಮಸ್ಯೆಗಳನ್ನು ಮಾತ್ರ ಇತ್ಯರ್ಥಗೊಳಿಸಲು ನೇಮಿಸಲಾಗುವುದು. ಇತರ ಸಣ್ಣಪುಟ್ಟ ತಕರಾರುಗಳನ್ನು ರಾಜಿ ಪಂಚಾಯಿತಿ ಅಧಿಕಾರಿಗಳು ಇತ್ಯರ್ಥಗೊಳಿಸಬೇಕಾಗುವುದು.

ಸಾಮಾನ್ಯವಾಗಿ ರಾಜ್ಯದ ಕಾರ್ಮಿಕ ಕಮಿಷನರ್ ಅವರು ಮುಖ್ಯ ರಾಜಿ ಪಂಚಾಯಿತಿದಾರರು. ಇವರ ಕೈಕೆಳಗಿನ ಅಧಿಕಾರಿಗಳಾದ ಸಹಾಯಕ ಕಾರ್ಮಿಕ ಕಮಿಷನರ್ ಮತ್ತು ಕಾರ್ಮಿಕ ಅಧಿಕಾರಿಗಳು ರಾಜಿ ಪಂಚಾಯಿತಿ ಅಧಿಕಾರಿಗಳಾಗಿ ಕೆಲಸ ಮಾಡುತ್ತಾರೆ. ಔದ್ಯಮಿಕ ತಕರಾರು ಕಾಯಿದೆ ಪ್ರಕಾರ ರಾಜಿ ಪಂಚಾಯಿತಿದಾರನ ಕೆಲಸ ಅತಿ ಸರಳವಾದುದು; ಕಾರ್ಮಿಕರು ಮತ್ತು ಉದ್ಯಮಿಗಳನ್ನು ಒಂದುಗೂಡಿಸಿ ಅವರಲ್ಲಿ ಬೆಳೆದು ಬಂದಿರಬಹುದಾದ ಪರಸ್ಪರ ದ್ವೇಷವನ್ನು ತೊಡೆದು ಹಾಕಿ ಪರಸ್ಪರ ಒಪ್ಪಂದಕ್ಕೆ ಬರುವ ಹಾಗೆ ಸಹಾಯ ಮಾಡುವುದು. ಕಾಯಿದೆಯ ಪ್ರಕಾರ ಭಾರತದಲ್ಲಿ ರಾಜಿ ಪಂಚಾಯಿತಿದಾರ ಪರಿಣಾಮಕಾರಿ ಪಾತ್ರವಹಿಸುವುದಿಲ್ಲ. ಆದರೆ ನಿಜಸ್ಥಿತಿಯಲ್ಲಿ ರಾಜಿ ಪಂಚಾಯಿತಿದಾರನ ಪಾತ್ರ ಪರಿಣಾಮಕಾರಿಯಾದದ್ದು. ಎರಡೂ ಪಕ್ಷಗಳನ್ನು ಒಂದುಗೂಡಿಸುವುದೇ ಅಲ್ಲದೆ ಈತ ಆಗಾಗ ಕಾನೂನಿನ ದೃಷ್ಟಿಯಲ್ಲಿ ತಕರಾರನ್ನು ಹೇಗೆ ನೋಡಬೇಕೆಂಬುದನ್ನು ವಿಷದಪಡಿಸುತ್ತಿರುತ್ತಾನೆ. ತಕರಾರಿಗೆ ಸಂಬಂಧಪಟ್ಟ ತನ್ನ ಅಭಿಪ್ರಾಯಗಳನ್ನು ಅವರ ಮುಂದಿಡುತ್ತಾನಲ್ಲದೆ ಒಪ್ಪಂದಕ್ಕೆ ಯಾವ ರೀತಿ ಎರಡೂ ಪಕ್ಷಗಳು ಬರಬಹುದು ಎಂಬುದನ್ನು ಮನದಟ್ಟುಮಾಡಿಕೊಡುತ್ತಾನೆ. ರಾಜಿ ಪಂಚಾಯಿತಿದಾರನ ವ್ಯಕ್ತಿತ್ವ ಪ್ರಭಾವಯುತವಾಗಿದ್ದರಂತೂ ಆತ ತನ್ನ ತೀರ್ಮಾನವನ್ನೇ ಪಕ್ಷಗಳು ಒಪ್ಪುವಂತೆ ಮಾಡಬಹುದು. ಪಂಚಾಯಿತಿದಾರನ ಸಹಾಯದಿಂದ ಕಾರ್ಮಿಕರೂ ಉದ್ಯಮಿಗಳೂ ಒಪ್ಪಂದಕ್ಕೆ ರಾಜಿಯಾದ ಪಕ್ಷದಲ್ಲಿ, ಅಂಥ ಒಪಂದವನ್ನು ರಾಜಿ ಒಪ್ಪಂದವೆಂದು (ಸೆಟಲ್‍ಮೆಂಟ್) ಕರೆಯುತ್ತಾರೆ. ರಾಜಿ ಒಪಂದಕ್ಕೆ ಎರಡು ಪಕ್ಷದವರಲ್ಲದೆ ರಾಜಿ ಪಂಚಾಯಿತಿದಾರ ಸಹ ರುಜು ಮಾಡಬೇಕು. ಹೀಗೆ ರುಜುವಾದ ರಾಜಿ ಒಪ್ಪಂದ ಎಲ್ಲ ಕಾರ್ಮಿಕರಿಗೂ ಅನ್ವಯಿಸುತ್ತದೆ. ರಾಜಿಗೆ ಒಪ್ಪದ ಎದುರಾಳಿ ಸಂಘದ (ರೈವಲ್ ಯೂನಿಯನ್) ಸದಸ್ಯರಿಗೂ ಈ ಒಪ್ಪಂದ ಅನ್ವಯಿಸುತ್ತದೆ. ಆದರೆ ರಾಜಿ ಪಂಚಾಯಿತಿ ಸಫಲವಾಗದಿದ್ದಲ್ಲಿ ಪಂಚಾಯಿತಿದಾರ ಸರ್ಕಾರಕ್ಕೆ ರಾಜಿ ಪಂಚಾಯಿತಿಯ ನಡವಳಿಕೆಗಳನ್ನು (ಪ್ರೊಸೀಡಿಂಗ್ಸ್) ಕುರಿತು ವರದಿ ಕಳುಹಿಸುತ್ತಾನೆ. ಇದರ ಮೇಲೆ ಸರ್ಕಾರ ಸಂಬಂಧಪಟ್ಟ ತಕರಾರನ್ನು ಪಂಚಾಯಿತಿಗೆ (ಆರ್ಬಿಟ್ರೇಷನ್) ಕಳುಹಿಸುವ ಬಗ್ಗೆ ನಿರ್ಧರಿಸುತ್ತದೆ.

	ಭಾರತದಲ್ಲಿ ರಾಜಿ ಪಂಚಾಯಿತಿ ಮೂಲಕ ಅನೇಕ ತಕರಾರುಗಳನ್ನು ಇತ್ಯರ್ಥಗೊಳಿಸಿದೆಯಾದರೂ ಈ ವ್ಯವಸ್ಥೆ ಅಷ್ಟೇನೂ ಪರಿಣಾಮಕಾರಿಯಾಗಿಲ್ಲವೆನಿಸುವುದು. ಇದಕ್ಕೆ ಒಂದು ಕಾರಣವಿದೆ. ಅನೇಕರ ದೃಷ್ಟಿಯಲ್ಲಿ ನಮ್ಮಲ್ಲಿ ಜಾರಿಯಲ್ಲಿರುವ ಕಡ್ಡಾಯ ಪಂಚಾಯಿತಿಯೇ ಇದಕ್ಕೆ ಕಾರಣ. ಕಾರ್ಮಿಕರು ಮತ್ತು ಉದ್ಯಮಿಗಳು ಹೇಗಿದ್ದರೂ ಕಡ್ಡಾಯ ಪಂಚಾಯಿತಿ ಮಟ್ಟದಲ್ಲಿ ತಮ್ಮ ತಕರಾರು ಇತ್ಯರ್ಥವಾಗಲೇಬೇಕಲ್ಲ ಎಂಬ ಭಾವನೆಯಿಂದ ರಾಜಿ ಪಂಚಾಯಿತಿ ವಿಷಯದಲ್ಲಿ ಉದಾಸೀನರಾಗಬಹುದು. ಅಲ್ಲದೆ ಸರ್ಕಾರ ರಾಜಿಪಂಚಾಯಿತಿ ವಿಫಲವಾದರೆ ಮಾತ್ರ ತಕರಾರನ್ನು ಕಡ್ಡಾಯ ಪಂಚಾಯಿತಿಗೆ ಹಾಕಬೇಕೆಂದು ನಿಶ್ಚಯಿಸಿಕೊಂಡಿದ್ದರೆ ಎರಡು ಪಕ್ಷದವರೂ ರಾಜಿ ಪಂಚಾಯಿತಿಗೆ ಒಪ್ಪುವುದು ನೆಪಮಾತ್ರಕ್ಕೆ ಹೊರತು ಒಪ್ಪಂದಕ್ಕೆ ಬರುವ ದೃಷ್ಟಿಯಿಂದಲ್ಲ. ಆದಕಾರಣ, ರಾಜಿ ಪಂಚಾಯಿತಿಗೆ ವಹಿಸಿದ ಬಹುಪಾಲು ತಕರಾರುಗಳು ಇತ್ಯರ್ಥವಾಗದೆ ಕಡ್ಡಾಯ ಪಂಚಾಯಿತಿಗೆ ಹೋಗುವ ಸಂಭವವುಂಟು. ಈ ನ್ಯೂನತೆ ಸರ್ಕಾರ ಮತ್ತು ತಜ್ಞರ ಗಮನಕ್ಕೆ ಬಂದಿದ್ದು ಇದಕ್ಕೆ ಪರಿಹಾರವಾಗಿ ತಿದ್ದುಪಡಿ ಆಗಬೇಕಿದೆ.		
(ಎ.ಬಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ